ನೀವು ಧ್ಯಾನ ಮಾಡುತ್ತಿರುವಿರೊ ಅಥವಾ ನಿದ್ದೆ ಮಾಡುತ್ತಿರುವಿರೊ? ಧ್ಯಾನ ಮತ್ತು ನಿದ್ದೆಯ ನಡುವಿನ ವ್ಯತ್ಯಾಸವನ್ನು ತಜ್ಞರು ವಿವರಿಸುತ್ತಾರೆ.

- ಕ್ರಿಸ್ ಡೇಲ್, ಉನ್ನತ ಧ್ಯಾನ ಶಿಬಿರದ ಶಿಕ್ಷಕರು

ಧ್ಯಾನವನ್ನು ಮಾಡಲು ಆರಂಭಿಸುತ್ತಿರುವವರಿಗೆ, ಧ್ಯಾನ ಮಾಡುವ ಸಮಯದಲ್ಲಿ ತಾವು ನಿದ್ದೆ ಮಾಡುತ್ತಿದ್ದೇವೆಯೆ ಅಥವಾ ಧ್ಯಾನದ ಸ್ಥಿತಿಗೆ ಹೊಕ್ಕಿದ್ದೇವೆಯೆ ಎಂಬ ಸಂಶಯ ಬರುತ್ತದೆ. ಇದು ಸಹಜವೆ. ಏಕೆಂದರೆ ಧ್ಯಾನವು ನಮಗೆ ಅಭ್ಯಾಸವಾಗುವವರೆಗೂ, ಆಳವಾದ ವಿಶ್ರಾಂತಿಯನ್ನು ನಾವು ನಿದ್ದೆಯೊಡನೆ ಸಂಬಂಧಪಡಿಸಿಕೊಳ್ಳುತ್ತೇವೆ.

ವ್ಯವಸ್ಥೆಯ ಶುದ್ಧೀಕರಣ : ಒತ್ತಡ ಮತ್ತು ದಣಿವಿನ ಬಿಡುಗಡೆ

ಕೆಲವೊಮ್ಮೆ ಧ್ಯಾನ ಮಾಡುತ್ತಲಿರುವಾಗ ಹಾಗೆಯೇ ನಿದ್ದೆ ಮಾಡಿಬಿಡುತ್ತೇವೆ. ಅದು ಪರವಾಗಿಲ್ಲ. ಧ್ಯಾನ ಮಾಡುವಾಗ ನಿದ್ದೆ ಮಾಡಬಾರದೆಂದು ಪರಿಶ್ರಮ ಮಾಡುವುದು ಬೇಡ. ಅದರ ಬದಲಿಗೆ, ಧ್ಯಾನ ಮಾಡುವಾಗ ಬರುವ ನಿದ್ದೆ ಮತ್ತು ಮಂಕುತನವನ್ನು ಒತ್ತಡ ಮತ್ತು ದಣಿವಿನ ಬಿಡುಗಡೆಯ ಪ್ರಕ್ರಿಯೆ ಎಂದುಕೊಳ್ಳಬಹುದು. ಕೆಲವರಿಗೆ ಧ್ಯಾನ ಮಾಡುವ ಸಮಯದಲ್ಲಿ ನಿದ್ದೆ ಮತ್ತು ದಣಿವನ್ನು ಅನುಭವಿಸುವುದು ಅವಶ್ಯಕವಾಗುತ್ತದೆ. ಕೆಲವೊಮ್ಮೆ ಧ್ಯಾನದ ನಂತರವೂ ಇದು ಅವಶ್ಯಕವಾಗುತ್ತದೆ. ಇವೆಲ್ಲವೂ ಲಾಭದಾಯಕವಾದ ಶುದ್ಧೀಕರಣದ ಪ್ರಕ್ರಿಯೆ ಎಂದು ನೆನಪಿನಲ್ಲಿಟ್ಟುಕೊಳ್ಳುವುದು ಅವಶ್ಯಕ.

ಧ್ಯಾನ ಮಾಡುತಲಿರುವಾಗ ಮಲಗಿ ನಿದ್ದೆ ಮಾಡಬೇಕೆಂಬ ಬಲವಾದ ಇಚ್ಛೆ ಉಂಟಾದರೆ, ಹಾಗೆಯೇ ಮಾಡಿ (ಇದು ಬಹಳ ಅವಶ್ಯಕ ಎಂದು ಅನಿಸದವರೆಗೆ ನಿದ್ದೆ ಮಾಡುವುದು ಬೇಡ!). ನೀವು ಎಚ್ಚೆತ್ತುಕೊಂಡಾಗ, ಎದ್ದು ಕುಳಿತು ಐದು ಅಥವಾ ಅದಕ್ಕಿಂತಲೂ ಹೆಚ್ಚು ನಿಮಿಷಗಳವರೆಗೆ ಧ್ಯಾನ ಮಾಡಿ. ನಿಮ್ಮ ವ್ಯವಸ್ಥೆಯು ಹಿಂದಿನ ದಣಿವನ್ನೆಲ್ಲಾ ಹೊರಹಾಕಿರುತ್ತದೆ. ಆದ್ದರಿಂದ ಎದ್ದ ನಂತರ ಸ್ವಲ್ಪ ಕಾಲ ಧ್ಯಾನ ಮಾಡಿದರೂ ಸಹಾಯವಾಗುತ್ತದೆ.

ಧ್ಯಾನ ಮತ್ತು ನಿದ್ದೆಯ ನಡುವಿನ ವ್ಯತ್ಯಾಸಗಳು

ಧ್ಯಾನವನ್ನು ಸ್ವಲ್ಪ ಕಾಲ ಮಾಡುತ್ತಾ ಹೋದಂತೆ, ನಿದ್ದೆ ಮತ್ತು ಧ್ಯಾನ ಬೇರೆ ಬೇರೆ ಸ್ಥಿತಿಗಳು ಎಂದು ಧ್ಯಾನ ಮಾಡುವವರಿಗೆ ಅರ್ಥವಾಗುತ್ತದೆ. ನಿದ್ದೆಯಿಂದ ಹೊರಬಂದಾಗ ಸ್ವಲ್ಪ ಮಂಕಾದಂತೆ ಅನಿಸುತ್ತದೆ. ಆದರೆ ಆಳವಾದ, “ಮನಸ್ಸಿಲ್ಲದ” ಸ್ಥಿತಿಯಿಂದ ಹೊರಬಂದಾಗ ಮನಸ್ಸಿನ ಸ್ಪಷ್ಟತೆ, ಪ್ರಶಾಂತವಾದ ಮನಸ್ಸನ್ನು ಅನುಭವಿಸಬಹುದು ಮತ್ತು ಸಂತೋಷವಾಗಿದ್ದೀರಿ ಎಂದು ಮನದಟ್ಟಾಗುತ್ತದೆ.

ಅದಲ್ಲದೆ, ಆಳವಾದ ನಿದ್ದೆ ಮತ್ತು ಧ್ಯಾನದ ಸಮಯದ ಉಸಿರಾಟದ ಮಾದರಿಗಳು ಬೇರೆ ಬೇರೆಯಾಗಿರುತ್ತವೆ. ಆಳವಾದ ಧ್ಯಾನದ ಸಮಯದಲ್ಲಿ ಉಸಿರು ಬಹಳ ಕೃಶವಾಗಿರುತ್ತದೆ ಅಥವಾ ಉಸಿರಾಟ ನಿಲ್ಲುವ ಸಾಧ್ಯತೆಯೂ ಇದೆ. ಆದರೆ ನಿದ್ದೆಯ ಸಮಯದಲ್ಲಿ ಉಸಿರಾಟ ಸ್ವಲ್ಪ ಮಾತ್ರ ಕಡಿಮೆಯಾಗುತ್ತದೆ.

ಧ್ಯಾನ ಮಾಡುವ ಸಮಯದಲ್ಲಿ ನೀವು ನಿದ್ದೆ ಮಾಡುತ್ತಿರುವಿರೆ ಅಥವಾ ಆಳವಾಗಿ ಧ್ಯಾನ ಮಾಡುತ್ತಿದ್ದಿರೆ ಎಂದು ತಿಳಿಯುವ ಗೋಜಿಗೆ ಹೋಗಬೇಡಿ. ಇದರಿಂದ ಧ್ಯಾನದ ಪ್ರಕ್ರಿಯೆಯ ಮುಗ್ಧತೆಗೆ ಅಡ್ಡಿಯಾಗುತ್ತದೆ. “ಏನಾದರೂ ಸರಿಯೆ” ಎಂಬ ಭಾವನೆಯು ಇಲ್ಲಿ ಅತೀ ಮುಖ್ಯವಾದದ್ದು.

ನಿದ್ದೆ ಮತ್ತು ಧ್ಯಾನದ ನಡುವೆ ಇರುವ ಮುಖ್ಯವಾದ ವ್ಯತ್ಯಾಸವೆಂದರೆ, ಧ್ಯಾನದ ಸಮಯದಲ್ಲಿ ಅರಿವಿರುತ್ತದೆ, ನಿದ್ದೆಯ ಸಮಯದಲ್ಲಿ ಅರಿವು ಇರುವುದಿಲ್ಲ. ಆದರೆ ಧ್ಯಾನದ ಅರಿವಿನ ಸ್ಥಿತಿಯು, ಜಾಗೃತವಾಗಿರುವ ಸ್ಥಿತಿಗಿಂತಲೂ ಭಿನ್ನವಾಗಿರುತ್ತದೆ. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು, ಧ್ಯಾನ ಮತ್ತು ನಿದ್ದೆ ಹೇಗೆ ಭಿನ್ನವಾಗಿವೆ ಎಂದು ತಿಳಿಯಲು ಚೈತನ್ಯದ ನಾಲ್ಕು ಸ್ಥಿತಿಗಳ ಬಗ್ಗೆ ತಿಳಿಯಬೇಕು – ಮನಸ್ಸು, ಬುದ್ಧಿ, ಸ್ಮೃತಿ ಮತ್ತು ಅಹಂಕಾರದ ಬಗ್ಗೆ ತಿಳಿಯಬೇಕು ಮತ್ತು ಇವು ಜಾಗೃತಿ, ಸ್ವಪ್ನ ಮತ್ತು ನಿದ್ರಾ ಸ್ಥಿತಿಯಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿಯಬೇಕು ಮತ್ತು ಚೈತನ್ಯದ ನಾಲ್ಕನೆಯ ಸ್ಥಿತಿಯ ಬಗ್ಗೆ ತಿಳಿಯಬೇಕು. ನಾಲ್ಕನೆಯ ಸ್ಥಿತಿಯನ್ನು ತುರಿಯಾವಸ್ಥೆ ಎನ್ನುತ್ತಾರೆ ಮತ್ತು ಇದನ್ನು ಧ್ಯಾನದಲ್ಲಿ ಅನುಭವಿಸಬಹುದು.

ಜಾಗೃತಾವಸ್ಥೆಯಲ್ಲಿ ಮನಸ್ಸು, ಬುದ್ಧಿ, ಸ್ಮೃತಿ ಮತ್ತು ಅಹಂಕಾರವೆಲ್ಲವೂ ಸ್ವಲ್ಪ ಮಟ್ಟಿಗೆ ಕೆಲಸ ಮಾಡುತ್ತವೆ. ಸ್ವಪ್ನಾವಸ್ಥೆಯಲ್ಲಿ ಕೇವಲ ಚಿತ್ತ (ಸ್ಮೃತಿ) ಸಕ್ರಿಯವಾಗಿ ಕೆಲಸ ಮಾಡುತ್ತದೆ. ಸುಷುಪ್ತಿಯ ಅವಸ್ಥೆಯಲ್ಲಿ ಈ ಎಲ್ಲಾ ನಾಲ್ಕು ಮಾಯವಾಗುತ್ತವೆ, ಚೈತನ್ಯವು ಯಾವ ಚಟುವಟಿಕೆಯೂ ಇಲ್ಲದೆ ವಿಶ್ರಮಿಸುತ್ತದೆ.

ಧ್ಯಾನದ ಸ್ಥಿತಿಯಲ್ಲಿ ಎಲ್ಲಾ ಇಂದ್ರಿಯಗಳಿಂದಲೂ ಮಾಹಿತಿಯನ್ನು ಮನಸ್ಸು ಪಡೆಯುತ್ತದೆ ಮತ್ತು ಪೂರ್ಣವಾಗಿ ಹಿನ್ನಲೆಗೆ ಹೋಗಿಬಿಡುತ್ತದೆ. ಅಹಂಕಾರವೂ ನಿಷ್ಕ್ರಿಯವಾಗುತ್ತದೆ, ಆದರೆ ಬುದ್ಧಿ ಮತ್ತು ಚಿತ್ತ ಸೂಕ್ಷ್ಮವಾಗಿ ಕೆಲಸ ಮಾಡುತ್ತಿರುತ್ತವೆ. ಧ್ಯಾನವು ನಿದ್ದೆಯಂತೆಯೆ ಇರುತ್ತದೆ, ಆದರೆ ಬುದ್ಧಿಯ ಸೂಕ್ಷ್ಮ ಎಳೆಯನ್ನು ಹೊಂದಿರುತ್ತದೆ. ತುರಿಯಾವಸ್ಥೆಯಲ್ಲಿ ನಮ್ಮ ನಿಜ ಸ್ವಭಾವವನ್ನು ಸ್ವಯಂಸ್ಫುರಿತವಾಗಿ ಗ್ರಹಿಸಬಹುದು.

ಆಳವಾದ ಶುದ್ಧೀಕರಣಕ್ಕಾಗಿ ಧ್ಯಾನದಲ್ಲಿ ಬಿಟ್ಟು ಬಿಡಬೇಕು

ಬಿಟ್ಟು ಬಿಡುವುದು ಎರಡು ರೀತಿಯೆಂದು ಗುರುದೇವ್ ಶ್ರೀ ಶ್ರೀ ರವಿಶಂಕರರು ಹೇಳುತ್ತಾರೆ. ಬಿಟ್ಟು ಬಿಡುವ ಒಂದು ರೀತಿಯೆಂದರೆ ಎಲ್ಲವೂ ಬಿದ್ದು ಹೋಗುತ್ತದೆ ಮತ್ತು ನೀವು ಪ್ರಜ್ಞೆಯಿಲ್ಲದ ಸ್ಥಿತಿಗೆ ತೆರಳುತ್ತೀರಿ. ಇದು ನಿದ್ದೆ, ತಾಮಸಿಕ ಸ್ಥಿತಿ. ಇಲ್ಲಿ ಜ್ಞಾನವು ಲಭ್ಯವಾಗಿರುವುದಿಲ್ಲ. ಮತ್ತೊಂದು ಬಿಟ್ಟು ಬಿಡುವ ರೀತಿಯೆಂದರೆ ನೀವು ಪೂರ್ಣವಾಗಿ ವಿಶ್ರಮಿಸಬಹುದು ಆದರೆ ಅತೀ ಸೂಕ್ಷ್ಮವಾಗಿ ಸ್ವಲ್ಪ ಸಂಕಲ್ಪವಿರುತ್ತದೆ ಅಥವಾ ಭಾವನೆಯಿರುತ್ತದೆ. ಅದೇ ಧ್ಯಾನ.

ಧ್ಯಾನ ಮತ್ತು ನಿದ್ದೆಯ ಸ್ಥಿತಿಯಲ್ಲಿ ಚಯಾಪಚಯವು ಕುಗ್ಗುತ್ತದೆ, ಉಸಿರಾಟ ಮತ್ತು ದೇಹದ ಇತರ ಚಟುವಟಿಕೆಗಳೂ ಕುಗ್ಗುತ್ತವೆ. ಎರಡೂ ಒತ್ತಡವನ್ನು ಬಿಡುಗಡೆ ಮಾಡುತ್ತವೆಯಾದರೂ ಧ್ಯಾನದಿಂದ ಸಿಗುವ ವಿಶ್ರಾಂತಿಯು, ನಿದ್ದೆಯ ವಿಶ್ರಾಂತಿಗಿಂತಲೂ ಬಹಳ ಆಳವಾಗಿರುತ್ತದೆ. ಇದರಿಂದಾಗಿ ನಮ್ಮಲ್ಲಿ ಆಳವಾಗಿ ಹುದುಗಿರುವ ಸಂಸ್ಕಾರಗಳು ವ್ಯವಸ್ಥೆಯನ್ನು ಬಿಟ್ಟು ಹೋಗುತ್ತವೆ. ಆದರೆ ಧ್ಯಾನವು ನಿದ್ದೆಗಿಂತಲೂ ಅತೀತವಾದದ್ದು. ಚೈತನ್ಯವು ತನ್ನ ಬಗ್ಗೆ ಪ್ರಜ್ಞಾಪೂರ್ವಕವಾಗಿ ತಿಳಿದುಕೊಳ್ಳುತ್ತದೆ. ಅದೇ ಚೈತನ್ಯವು ಜಾಗೃತ ಸ್ಥಿತಿಯಲ್ಲಿ, ಸ್ವಪ್ನಾವಸ್ಥೆಯಲ್ಲಿ, ನಿದ್ರಾವಸ್ಥೆಯಲ್ಲಿದೆ ಮತ್ತು ಇವೆಲ್ಲದ್ದಕ್ಕೂ ಸಾಕ್ಷಿಯಾಗಿದೆ.

ನಿದ್ರಾವಸ್ಥೆಯಲ್ಲಿ ಚೈತನ್ಯದ ಯಾವ ಸ್ಥಿತಿಯೂ ಸಕ್ರಿಯವಾಗಿ ಇರದಿದ್ದರೂ, ನಿದ್ದೆಗೆ ಸಾಕ್ಷಿಯಾಗಿರುತ್ತದೆ. ಆದ್ದರಿಂದಲೇ ನಿಮಗೆ “ಒಳ್ಳೆಯ ನಿದ್ದೆ” ಬಂದಿತು ಎಂದು ತಿಳಿಯುವುದು.

ಗುರುದೇವ್ ಶ್ರೀ ಶ್ರೀ ರವಿಶಂಕರರು ಸುಂದರವಾಗಿ, “ಜಾಗೃತಿ ಮತ್ತು ನಿದ್ದೆಯು ಸೂರ್ಯೋದಯ ಮತ್ತು ಕತ್ತಲಿನಂತೆ ಮತ್ತು ಕನಸು ಇವೆರಡರ ನಡುವೆ ಇರುವ ನಸುಕಿನಂತೆ. ಧ್ಯಾನವು ಬಾಹ್ಯಾಕಾಶಕ್ಕೆ ತೆರಳುವ ವಿಮಾನಯಾನದಂತೆ. ಅಲ್ಲಿ ಸೂರ್ಯೋದಯವೂ ಇಲ್ಲ, ಸೂರ್ಯಸ್ತಮವೂ ಇಲ್ಲ – ಏನೂ ಇಲ್ಲ!” ಎನ್ನುತ್ತಾರೆ.